ಪಾಲಿನೇಷ್ಯ 
ಉ. ಅ. 300 ಮತ್ತು ದ. ಅ. 470 ನಡುವೆ, ಮಧ್ಯ ಪೆಸಿಫಿಕ್ ಸಾಗರದಲ್ಲಿ ಹರಡಿರುವ ದ್ವೀಪಗಳ ಗುಂಪು. ಓಷಿಯಾನಿಯದ ದ್ವೀಪ ಸಮೂಹಗಳ ಪೈಕಿ ಒಂದು. ಉಳಿದ ಎರಡು ಸಮೂಹಗಳಾದ ಮೆಲನೇಷ್ಯ ಮತ್ತು ಮೈಕ್ರೋನೀಷ್ಯಗಳಿಗೆ ಪೂರ್ವದಲ್ಲಿ ತ್ರಿಕೋಣಾಕಾರವಾಗಿ ಹಬ್ಬಿವೆ. ಗ್ರೀಕ್ ಭಾಷೆಯ ಪಾಲಿ (ಅನೇಕ) ಮತ್ತು ನಿಸೋಯ್ (ದ್ವೀಪಗಳು) ಎಂಬ ಪದಗಳಿಂದ ಪಾಲಿನೇಷ್ಯ ಎಂಬ ಪದದ ನಿಷ್ಪತ್ತಿಯಾಗಿದೆ. ಪಾಲಿನೇಷ್ಯದ ದ್ವೀಪಗಳ ಒಟ್ಟು ಭೂಪ್ರದೇಶದ ವಿಸ್ತೀರ್ಣ 2,90,000 ಚ.ಕಿ.ಮೀ.

	ಪಾಲಿನೇಷ್ಯದ ದ್ವೀಪಗಳ ಫ್ರೆಂಚ್ ಪಾಲಿನೇಷ್ಯ 118ಸಣ್ಣ ಪುಟ್ಟ ದ್ವೀಪಗಳನ್ನೊಳಗೊಂಡಿದೆ. ಇದರ ಒಟ್ಟು ವಿಸ್ತೀರ್ಣ 4,167 ಚ.ಕಿ.ಮೀ. ಸಮುದ್ರ ತೀರ 2,525ಕಿ.ಮೀ. ಜನಸಂಖ್ಯೆ 270,485 (ಜುಲೈ 2005).  ಪೈಕಿ ಅಮೆರಿಕಕ್ಕೆ ಸೇರಿದ ಹವಾಯಿ ದ್ವೀಪಗಳು ಉತ್ತರದಲ್ಲೂ ನ್ಯೂಜೀóಲೆಂಡ್ ದಕ್ಷಿಣದಲ್ಲೂ ಈಸ್ಟರ್ ಪೂರ್ವದಲ್ಲೂ ಇವೆ. ಈ ತ್ರಿಕೋನದ ಪಶ್ಚಿಮದ ಅಂಚಿನಲ್ಲಿ ಸಮೋವ, ಎಲಿಸ್ ದ್ವೀಪಗಳು ಮತ್ತು ಟೋಂಗ ಇವೆ. ಫ್ರೆಂಚರಿಗೆ ಸೇರಿದ ಸೊಸೈಟಿ ದ್ವೀಪಗಳು ಮಧ್ಯಭಾಗದಲ್ಲಿವೆ. ಇವುಗಳಲ್ಲಿ ತಾಹಿತಿಯೂ ಇದೆ. ಸೊಸೈಟಿ ದ್ವೀಪಗಳ ಈಶಾನ್ಯಕ್ಕೆ ಇರುವ ದ್ವೀಪಗಳು ಮಾರ್ಕೇಸಸ್. ಇವುಗಳ ನಡುವೆ ಪೂರ್ವದ ಕಡೆಗೆ ಟುವಮೋಟೂ ದ್ವೀಪಸ್ತೋಮ ಹಬ್ಬಿದೆ. ಕುಕ್ ಮತ್ತು ಟೋಕಲಾಮ ದ್ವೀಪಗಳು ಸೊಸೈಟಿ ದ್ವೀಪಗಳಿಗೆ ಪಶ್ಚಿಮದಲ್ಲೂ ಟೂಬವೈ ದ್ವೀಪಗಳು ದಕ್ಷಿಣದಲ್ಲೂ ಇವೆ.

	ಪಾಲಿನೇಷ್ಯ ದ್ವೀಪಗಳ ಪೈಕಿ ಹಲವು ಸಣ್ಣವು; ಹವಳದ ದಿಬ್ಬಗಳಿಂದ ಸೃಷ್ಟಿಯಾದವು. ದೊಡ್ಡ ದ್ವೀಪಗಳು ಅಗ್ನಿಪರ್ವತಗಳಿಂದ ರೂಪಿತವಾದವು. ಪೆಸಿಫಿಕ್ ಸಾಗರ ತಳದ ನೆಲಮೈ ಗಟ್ಟಿಯಾಗಿಲ್ಲದ ಕಾರಣ ಇಲ್ಲಿ ಭೂಕಂಪಗಳು ಸಾಮಾನ್ಯ. ಸಾಗರದಡಿಯಿಂದ ಸಾವಿರಾರು ಅಗ್ನಿಪರ್ವತಗಳು ಸೃಷ್ಟಿಯಾಗಿವೆ. ಇಂದಿಗೂ 300ಕ್ಕೂ ಹೆಚ್ಚಿನ ಜ್ವಾಲಾಮುಖಿಗಳು ಅಗ್ನಿಯನ್ನು ಕಾರುತ್ತವೆ. ಭೂಮಧ್ಯರೇಖೆಯ ಭಾಗದ ಕೆಲವು ದ್ವೀಪಗಳು ಸಮುದ್ರಮಟ್ಟಕ್ಕೆ ಬಹಳ ಎತ್ತರದಲ್ಲಿವೆ. ಅಲ್ಲಿಯ ಪರ್ವತಗಳ ಶಿಖರಗಳಲ್ಲಿ ಮಂಜು ಕವಿದಿರುತ್ತದೆ. ಹವಾಯಿ ದ್ವೀಪಗಳಲ್ಲಿ ಅಗ್ನಿಪರ್ವತಗಳ ಸಾಲುಗಳಿವೆ. ಆ ದ್ವೀಪದ ಮಾವುನ ಕಾಯ ಒಂದು ನಂದಿದ ಅಗ್ನಿಪರ್ವತ. ಅದು ಸಮುದ್ರಮಟ್ಟಕ್ಕೆ 4.201 ಮೀ. ಎತ್ತರದಲ್ಲಿದೆ. ಅದೇ ದ್ವೀಪದ ಮತ್ತೊಂದು ಅಗ್ನಿಪರ್ವತ ಮಾವುನ ಲೋವ. ಇದು ಸಮುದ್ರ ಮಟ್ಟಕ್ಕೆ 4,069 ಮೀ. ಎತ್ತರದಲ್ಲಿದೆ. 

	ವಾಯುಗುಣ: ಪಾಲಿನೇಷ್ಯದಲ್ಲಿ ಸಾಮಾನ್ಯವಾಗಿ ಉಷ್ಣವಲಯ ಮತ್ತು ಉಪ್ಲೋಷ್ಣವಲಯ ವಾಯುಗುಣ ಇದೆ. 210 ಅ -290 ಅ ಮಾಧ್ಯ ಉಷ್ಣತೆ ಇರುತ್ತದೆ. ಸಮುದ್ರದ ಮಟ್ಟದ ಭಾಗಗಳಲ್ಲಿ ಸರಾಸರಿ ಉಷ್ಣತೆ 30.50 ಅ. ದಕ್ಷಿಣ ಪಾಲಿನೇಷ್ಯದಲ್ಲಿ ಬೇಸಗೆ ಹಿತಕರ. ದಕ್ಷಿಣದ ನ್ಯೂಜೀóಲೆಂಡ್‍ನಲ್ಲಿ ಹೊರತು ಉಳಿದ ಕಡೆ ಚಳಿಗಾಲದಲ್ಲಿ ಮಂಜು ಬೀಳುವುದಿಲ್ಲ.

	ಪೆಸಿಫಿಕ್ ಸಾಗರದ ಉತ್ತರಾರ್ಧ ಗೋಳದಲ್ಲಿ ಪ್ರದಕ್ಷಿಣವಾಗಿಯೂ ದಕ್ಷಿಣಾರ್ಧ ಗೋಳದಲ್ಲಿ ಅಪ್ರದಕ್ಷಿಣವಾಗಿಯೂ ಹರಿಯುವ ಸಮುದ್ರ ಪ್ರವಾಹಗಳು ಪಾಲಿನೇಷ್ಯಯಾದ ದ್ವೀಪಗಳ ವಾಯುಗುಣದ ಮೇಲೆ ಪ್ರಭಾವ ಬೀರುತ್ತದೆ. ಋತುಗಳ ಹಾಗೂ ನಿಸರ್ಗದ ವೈಪರೀತ್ಯಗಳಿಂದ ಮಳೆ ದ್ವೀಪದಿಂದ ದ್ವೀಪಕ್ಕೆ ಭಿನ್ನವಾಗಿದೆ. ಪಶ್ಚಿಮ ಪಾಲಿನೇಷ್ಯದಲ್ಲಿ ಗುಡುಗು-ಮಿಂಚುಗಳೊಂದಿಗೆ ಮಳೆಯಾಗುತ್ತದೆ. ಆಗಾಗ ಚಂಡಮಾರುತಗಳು ಬೀಸುತ್ತವೆ. ಇವುಗಳಿಂದ ಸಾಮಾನ್ಯವಾಗಿ ದ್ವೀಪಗಳಿಗೆ ಅಪಾಯವಿಲ್ಲ. 

	ಸಸ್ಯಪ್ರಾಣಿವರ್ಗ: ಪಾಲಿನೇಷ್ಯ ದ್ವೀಪಗಳ ಮಣ್ಣಿವ ಗುಣಗಳಲ್ಲಿ ವ್ಯತ್ಯಾಸಗಳಿವೆ. ಅನೇಕ ದ್ವೀಪಗಳಲ್ಲಿ ಸುಣ್ಣ ಕಲ್ಲು ಹಾಗೂ ಅಗ್ನಿಪರ್ವತಗಳಿಂದ ಸೃಷ್ಟಿಯಾದ ಬಂಡೆಗಳುಂಟು. ಕೆಲವು ಕಡೆ ಮಳೆ ಮತ್ತು ಚಂಡಮಾರುತಗಳಿಂದ ಜ್ವಾಲಾಮುಖಿಗಳ ಲಾವಾಬಂಡೆಗಳು ಸವೆದು ಪುಡಿಮಣ್ಣಾಗಿರುವುದರಿಂದ ಭೂಮಿ ಬಹಳ ಫಲವತ್ತಾಗಿದೆ. ಹವಳದ ದಿಬ್ಬಗಳಿಂದ ಸೃಷ್ಟಿಯಾದ ದ್ವೀಪಗಳ ನೆಲದಲ್ಲಿ ಸಾರ ಕಡಿಮೆ. ಸಸ್ಯ ಹಾಗೂ ಪ್ರಾಣಿಗಳು ಪಾಲಿನೇಷ್ಯದ ವಿವಿಧ ಭಾಗಗಳಲ್ಲಿ ಹರಡಿರುವುದಕ್ಕೆ ಪೆಸಿಫಿಕ್ ಸಾಗರದ ಚಂಡಮಾರುತಗಳು ಹಾಗೂ ಸಮುದ್ರ ಪ್ರವಾಹಗಳು ಕಾರಣ. ಪಾಲಿನೇಷ್ಯದ ಸಸ್ಯಗಳು ಇಂಡೋ-ಮಲಯ ಸಸ್ಯ ವರ್ಗಕ್ಕೆ ಸಂಬಂಧಿಸಿದಂಥವು. ತೆಂಗು ಮತ್ತು ಕ್ಯಾಸುರಿನಾ ಮರಗಳು ಹೆಚ್ಚು. ಮಳೆ ಹೆಚ್ಚಾಗಿರುವ ದ್ವೀಪಗಳಲ್ಲಿ ದಟ್ಟ ಅಡವಿಗಳು ಮತ್ತು ಪೊದೆಗಳು ಬೆಳೆದಿವೆ. ಕೆಲವು ದೊಡ್ಡ ದ್ವೀಪಗಳಲ್ಲಿ ಹುಲ್ಲುಗಾಡುಗಳಿವೆ.

	ದ್ವೀಪಗಳಲ್ಲಿ ಆಮೆ, ಮೊಸಳೆ, ದಿವ್ಯಪಕ್ಷಿ, ಫ್ರಿಗೇಟ್, ಬಾವಲಿ, ಗಿಳಿ, ಜಲಪಕ್ಷಿಗಳು, ವಿವಿಧ ಬಣ್ಣಗಳ ಹಕ್ಕಿಗಳು ಇವೆ. ಕಡಲಂಚಿನಲ್ಲಿ ಮೀನು ಹೇರಳವಾಗಿದೆ. ಹಲವಾರು ಬಗೆಯ ಮತ್ಸ್ಯಗಳುಂಟು. ಮೀನುಗಾರಿಕೆ ಲಾಭದಾಯಕ. ಹವಳ ಹಾಗೂ ಆಮೆಯ ಚಿಪ್ಪುಗಳನ್ನು ಸಂಗ್ರಹಿಸುತ್ತಾರೆ. 

	ಜನ: ಪಾಲಿನೇಷ್ಯ ಜನ ಮಲೆಯ ಪರ್ಯಾಯ ದ್ವೀಪ ವಾಸಿಗಳಿಗೆ ಸಂಬಂಧಪಟ್ಟವರೆಂದು ತೋರುತ್ತದೆ. ಆದರೆ ಮನವಶಾಸ್ತ್ರ ಸಂಶೋಧನೆಗಳ ಪ್ರಕಾರ ಅನೇಕರು ಮಂಗೋಲ್ ನೆಗ್ರಾಯಿಡ್ ಹಾಗೂ ಕಾಕೇಷಿಯನ್ ಬುಡಕಟ್ಟಿನ ಜನರೊಂದಿಗೆ ಸಂಮಿಶ್ರಗೊಂಡವರು. ಇವರು ಕಂದುಬಣ್ಣದ, ಒಳ್ಳೆಯ ಮೈಕಟ್ಟಿನ ಎತ್ತರದ ಜನ. ಇವರ ಕೂದಲು ಕಪ್ಪು. ಇವರು ಸ್ಫುರದ್ರೂಪಿಗಳು. ಸರಳ ಜೀವಿಗಳು. ಪಾಲಿನೇಷ್ಯ ಜನರ ದೈಹಿಕ ಲಕ್ಷಣಗಳುಳ್ಳ ಜನರು ಸಾಮಾನ್ಯವಾಗಿ ಮತ್ತೆಲ್ಲೂ ಕಂಡುಬರುವುದಿಲ್ಲ. ಇವರಲ್ಲಿ ಕೆಲವರು ಇತ್ತೀಚೆಗೆ ಪಶ್ಚಿಮದ ಕೆಲವು ದ್ವೀಪಗಳಲ್ಲಿ ನೆಲೆಸಿದ್ದಾರೆ. ಏóಷ್ಯದಿಂದ ಹೊರಟ ಬಣ್ಣಗಳ ಸಂಮಿಶ್ರಣದ ಫಲವೇ ಪಾಲಿನೇಷ್ಯನರು ಎಂಬ ಅಭಿಪ್ರಾಯವೂ ಇದೆ. ದಕ್ಷಿಣ ಅಮೆರಿಕದ ಪೆರುವಿನ ಜನರ ಹಲವಾರು ಸಾಂಸ್ಕøತಿಕ ಲಕ್ಷಣಗಳು ಹಾಗೂ ಗೆಣಸಿನ ಬೆಳೆ ಪಾಲಿನೇಷ್ಯದ ದ್ವೀಪಗಳಲ್ಲಿ ಕಂಡುಬರುವುದರಿಂದ ಈ ಮೂಲ ನಿವಾಸಿಗಳು ಪೆರುವಿನಿಂದ ಪಶ್ಚಿಮಕ್ಕೆ ಚಲಿಸಿ ಬಂದವರೆಂದು ಕೆಲವು ಮಾನವ ಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಾಲಿನೇಷ್ಯ ಜನ ತಹೀತೀ ಮತ್ತು ಮಾರ್ಕೆಸಸ್ ದ್ವೀಪಗಳಲ್ಲಿ ಕ್ರಿ.ಪೂ. 500 ರಲ್ಲಿ ನೆಲೆಸಿರಬಹುದೆಂದು ಊಹಿಸಲಾಗಿದೆ.

	ಪಾಲಿನೇಷ್ಯದ ಕುಟುಂಬಗಳಲ್ಲಿ ಪುರುಷನದು ಪ್ರಧಾನ ಸ್ಥಾನ. ತಂದೆಯ ಹಾಗೂ ತಾಯಿಯ ಮೂಲಪುರುಷರಿಂದ ಹಿಡಿದು ವಂಶಾವಳಿಯನ್ನು ಗಣಿಸಲಾಗುತ್ತದೆ. ಸ್ತ್ರೀಯರಿಗೆ ಸಮಾಜದಲ್ಲಿ ಗಣ್ಯಸ್ಥಾನವುಂಟು. ಅನೇಕ ಸ್ತ್ರೀಯರು ಬಣನಾಯಿಕೆಯರಾಗಿದ್ದಾರೆ. ಬಣದ ನಾಯಕರು ಪ್ರತ್ಯೇಕ ವರ್ಗಕ್ಕೆ ಸೇರಿದವರು. ದ್ವೀಪವಾಸಿಗಳಾದ ಪಾಲಿನೇಷ್ಯ ಜನರಿಗೆ ಈಜು, ದೋಣಿ ನಡೆಸುವುದು ಹಾಗೂ ಮೀನುಗಾರಕೆಯಲ್ಲಿ ಆಸಕ್ತಿ. ಸಮುದ್ರದಿಂದ ಹವಳಗಳನ್ನು ತೆಗೆಯುವುದರಲ್ಲಿ ಇವರು ಪಳಗಿದವರು. ಮನೆಗಳನ್ನು ಬಿದಿರು ಹಾಗೂ ಮರಗಳ ಕಟ್ಟಿನಿಂದ ರಚಿಸಿ ಚಾವಣಿಗೆ ತೆಂಗಿನ ಸೋಗೆಯನ್ನು ಹಾಸುತ್ತಾರೆ. ಪೇಪರ್ ಮಲ್ಬೆರಿ ಮರದ ಒಳತೊಗಟೆಯ ನಾರಿನಿಂದ ವಸ್ತ್ರಗಳನ್ನು ಮಾಡಿ ತೊಟ್ಟುಕೊಳ್ಳುತ್ತಾರೆ. ನ್ಯೂಜೀಲೆಂಡ್, ತಹೀತಿ, ಹವಾಯಿ ಮೊದಲಾದ ದ್ವೀಪವಾಸಿಗಳ ಜನಪದ ನೃತ್ಯಗಳು ವೈವಿಧ್ಯಪೂರ್ಣವಾದಂಥವು. ಇವರು ನರ್ತಿಸುವಾಗ ಸೆಣಬಿನಂಥ ಗಿಡದ ಎಲೆಗಳಿಂದ ತಯಾರಿಸಿದ ಲಂಗಗಳನ್ನು ಧರಿಸುತ್ತಾರೆ.

	ಓಷಿಯಾನಿಯಾದಲ್ಲೇ ಅತ್ಯಂತ ದೊಡ್ಡವಾದ ಪಟ್ಟಣಗಳು ನ್ಯೂಜಿóೀಲೆಂಡ್ ಮತ್ತು ಹವಾಯಿ ದ್ವೀಪಗಳಿವೆ. ಇವು ವಾಣಿಜ್ಯ ಕೈಗಾರಿಕೆಗಳಲ್ಲಿ ಮುಂದುವರಿದವುಗಳಲ್ಲದೆ ಆಧುನಿಕ ವಿದ್ಯಾಕೇಂದ್ರಗಳಾಗಿವೆ. ಹವಾಯಿ 1959 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ 50 ನೆಯ ರಾಜ್ಯವಾಯಿತು.

	ಪಾಲಿನೇಷ್ಯದ ಹವಾಯಿ, ಮಾವೊರೀ, ಮಾರ್ಕೇಸಸ್, ಸಮೋವ, ಟೋಂಗ ಮತ್ತು ತಹೀತಿ ಜನರು ಆಸ್ಟ್ರೋನೇಷ್ಯನ್ ಗುಂಪಿನ ಭಾಷೆಯನ್ನಾಡುತ್ತಾರೆ. ಪಾಲಿನೇಷ್ಯನ್ ನುಡಿ ಎಲ್ಲ ದ್ವೀಪಗಳಲ್ಲೂ ಒಂದೇ ರೂಪದಲ್ಲಿದೆ. ನಿರ್ಜನವಾಗಿದ್ದ ಈ ದ್ವೀಪಗಳಲ್ಲಿ ಈ ಜನರು ನೆಲಸಿದ ಪ್ರಯುಕ್ತ ಇವರ ಭಾಷೆಯಲ್ಲಿ ಯಾವ ಬದಲಾವಣೆಯೂ ಕಂಡುಬರುವುದಿಲ್ಲ. ಇವರ ಭಾಷೆಯಲ್ಲಿ ಮಲೆಯ ಭಾಷೆಯ ಅನೇಕ ಶಬ್ದಗಳಿವೆ.

	ಧರ್ಮ: ವಸ್ತುಪೂಜೆ ಮತ್ತು ಪಿತೃಪೂಜೆಗಳ ಮೇಲೆ ಪಾಲಿನೇಷ್ಯದ ಪ್ರಾಚೀನ ಧರ್ಮ ಆಧಾರಿತವಾಗಿದೆ. ಹಿಂದೆ ಧಾರ್ಮಿಕ ಕ್ರಿಯೆಗಳಲ್ಲಿ ನರಬಲಿ ಪ್ರಧಾನವಾಗಿತ್ತು. ಪಾಲಿನೇಷ್ಯನ್ನರ ಧರ್ಮದಲ್ಲಿ ಮಾನದ ಕಲ್ಪನೆ ಪ್ರಧಾನವಾದ್ದು. ಮಾನ ಎಂದರೆ ಶಕ್ತಿ. ಪ್ರಕೃತಿಯ ಎಲ್ಲ ಚರಾಚರ ವಸ್ತುಗಳಲ್ಲೂ ಶಕ್ತಿ ಇದೆಯೆಂಬ ಸರ್ವಚೇತನಪಂಥ ಇವರದು. ಕೆಲವು ವಸ್ತುಗಳಲ್ಲೂ ಅತಿಮಾನುಷಶಕ್ತಿ ಇದೆಯೆಂದು ಈ ಜನ ನಂಬುತ್ತಾರೆ. ಕ್ರೈಸ್ತಮತವು ಪಾಲಿನೇಷ್ಯದಲ್ಲಿ ಹರಡಿದೆ.

	ಆರ್ಥಿಕತೆ: ಜನರ ಮುಖ್ಯ ಕಸುಬುಗಳು ಮೀನುಗಾರಿಕೆ ಮತ್ತು ವ್ಯವಸಾಯ. ಬೆಟ್ಟಗುಡ್ಡಗಳ ಇಳಕಲುಗಳಲ್ಲಿ ಬೇಸಾಯ ಪ್ರಧಾನವಾಗಿದೆ. ಮುಖ್ಯ ಬೆಳೆಗಳು ಗೆಣಸು, ಕೆಸವ, ಬಾಳೆ, ಬ್ರೆಡ್ ಫ್ರೂಟ್, ಕಬ್ಬು ಮತ್ತು ತೆಂಗು. ಜನರು ಹಂದಿಗಳನ್ನು ಹೆಚ್ಚಾಗಿ ಸಾಕುತ್ತಾರೆ. ಇವರು ಕುಶಲಕಲೆಗಳಲ್ಲಿ ನುರಿತವರು. ನೀಳ್ದೋಣಿಗಳ ರಚನೆಯಲ್ಲೂ ಬುಟ್ಟಿ ಹೆಣೆಯುವುದು, ನೇಯ್ಗೆ, ಕುಂಬಕಲೆ, ಕಲಾಪೂರ್ಣವಾದ ಮರದ ಸಾಮಾನುಗಳ ತಯಾರಿಕೆ ಇವುಗಳಲ್ಲೂ ಇವರು ನಿಪುಣರಾಗಿದ್ದಾರೆ. ಅನೇಕ ದ್ವೀಪಗಳಿಂದ ಕೊಬ್ಬರಿ ಹಾಗೂ ತೆಂಗು ರಫ್ತಾಗುತ್ತವೆ. ಜನರು ಸಮೀಪದ ದ್ವೀಪಗಳಿಗೆ ಹೋಗಿಬರಲು ಮತ್ತು ಮೀನು ಹಿಡಿಯಲು ನೌಕೆಗಳನ್ನೂ ಉಪಯೋಗಿಸುತ್ತಾರೆ. ಹವಾಯಿ, ನ್ಯೂಜಿóೀಲೆಂಡ್ ಮೊದಲಾದ ದ್ವೀಪಗಳಿಗೆ ವಿಮಾನ ಸೌಲಭ್ಯವುಂಟು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ